ದೇವಿಯೇ, ಪೆಲಿಯಸ್ಸನ ಮಗನಾದ ಅಕಿಲೀಸನ ಕ್ರೋಧವನ್ನು ಹಾಡು. ಆ ಗ್ರೀಕರಿಗೆ ಊಹೆಗೂ ಮೀರಿದ ಸಂಕಷ್ಟವನ್ನು ತಂದಿತ್ತ ಅವನ ಕ್ರೋಧವನ್ನು ಹಾಡು. ಅನೇಕ ಯೋಧರನ್ನ ಹೇಡೀಸನ ಯಮಪುರಿಗೆ ಅಟ್ಟಿ, ಅಲ್ಲಿ ನಾಯಿ-ಹದ್ದುಗಳಿಗೆ ಅವರನ್ನೆಲ್ಲ ಬಡಿಸುವಂತಾಯಿತಲ್ಲ, ಆ ಕ್ರೋಧವನ್ನು ಹಾಡು. ಮತ್ತು, ಸ್ಯೂಸನ ತಂತ್ರ ಫಲಿಸಿದ್ದು ಹೇಗೆ? ಅದನ್ನೂ ಹಾಡು ದೇವಿ. ಅಟ್ರೇಯಸನ ಮಗನೂ ಶೂರನಾದ ಅಕಿಲೀಸನು ಜಗಳ ಮಾಡಿಕೊಂಡಿದ್ದರಿಂದ ಶುರುಮಾಡಿ ಹಾಡು. ಇವರಿಬ್ಬರ ಮಧ್ಯೆ ಕದನವನ್ನು ತಂದಿಕ್ಕಿದ ದೇವನು ಯಾರು? ಸ್ಯೂಸನ ಮತ್ತು ಲೀಟೋಳ ಮಗನಾದ ಅಪೋಲೋ ದೇವನಲ್ಲವೇ, ತನ್ನ ಪೂಜಾರಿಯಾದ ಕ್ರೈಸೀಸನನ್ನು ಅವಮಾನ ಮಾಡಿದ ಈ ರಾಜ ಅಗಮೆಮ್ನನ್ನನ ಮೇಲೆ ಕ್ರುದ್ಧನಾಗಿ ಗ್ರೀಕರ ಪಾಳೆಯದ ತುಂಬೆಲ್ಲ ಭಯಂಕರವಾದ ರೋಗವನ್ನು ಹಬ್ಬಿಸಿ ಜನರನ್ನೆಲ್ಲ ಯಮಲೋಕಕ್ಕೆ ಅಟ್ಟಿದುದು? ಈ ಪೂಜಾರಿಯು ಅಕೇಯನ್ನರ ಹಡುಗುಗಳ ಕಡೆಗೆ ಭರ್ತಿ ಕಾಣಿಕೆಗಳನ್ನು ತಂದಿದ್ದ, ತನ್ನ ಮಗಳನ್ನು ಬಿಡಿಸಿಕೊಂಡು ಹೋಗಲಿಕ್ಕೆ. ಅವನ ಬಂಗಾರ ಬಣ್ಣದ ದಂಡದಲ್ಲಿ ಅಪೋಲೋ ದೇವನ ಉಣ್ಣೆಯ ಪಟ್ಟೆಗಳೂ ಇದ್ದುವಂತೆ. ಈ ಅಪೋಲೋ ದೇವ ದೂರದ ಗುರಿಕಾರನಷ್ಟೆ? ಪೂಜಾರಪ್ಪ ಎಲ್ಲ ಗ್ರೀಕರನ್ನು ಉದ್ದೇಶಿಸಿ, ಅದರಲ್ಲೂ ಅಟ್ರೇಯಸನ ಈರ್ವರು ಮಕ್ಕಳಾದ ಅಗಮೆಮ್ನನ್ ಮತ್ತು ಮೆನೆಲೇಯಸ್ಸರನ್ನು ಕುರಿತು, “ಅಟ್ರೇಯಸನ ಮಕ್ಕಳೇ, ಮತ್ತು ದುಃಖಿತರಾದ ಇತರೆ ಯೋಧರೇ, ಓಲಿಂಪಸ್ ಪರ್ವತದಲ್ಲಿ ನೆಲೆಸಿದ ದೇವಾನುದೇವತೆಗಳ ಅನುಗ್ರಹವಿರಲಿ. ಪ್ರಯಾಮ್ ರಾಜನ ಈ ಪಟ್ಟಣವನ್ನು ನೀವು ಕೊಳ್ಳೆಹೊಡೆದು ದೂರದ ನಿಮ್ಮ ದೇಶಗಳನ್ನು ಸುರಕ್ಷಿತವಾಗಿ ತಲುಪುವಂತಾಗಲಿ. ಮತ್ತೇನಿಲ್ಲ, ನನ್ನ ಮಗಳನ್ನು ಬಿಟ್ಟು ಬಿಡಿ. ಇಗೋ, ಈ ಕಾಣಿಕೆಯೆಲ್ಲ ನಿಮಗಾಗಿ. ಇದೊಂದು ಮಾತು ನಡೆಸಿ. ಸ್ಯೂಸ್ ದೇವನ ಮಗನಾದ ಗುರಿಕಾರ ಅಪೋಲೇ ದೇವನ ಮೇಲೆ ಗೌರವವಿರಲಪ್ಪ, ನಿಮಗೆ.”